ನೆಲ್ಲಿ -
	ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮಧ್ಯಮ ಗಾತ್ರದ ವೃಕ್ಷ. ಭಾರತ ಮತ್ತು ಬರ್ಮಗಳ ಉಷ್ಣವಲಯದ ಅರಣ್ಯಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಲೆನಾಡಿನ ಪರ್ಣಪಾತಿ ಕಾಡುಗಳಲ್ಲೂ ಹೇರಳವಾಗಿದೆ. ಇದಕ್ಕೆ ಆರ್ಥಿಕ ಪ್ರಾಮುಖ್ಯ ಇದೆಯಾಗಿ ಮನೆಯ ಮುಂದಿನ ಆವರಣಗಳಲ್ಲೂ ನೆಲ್ಲಿಕಾಯಿ ಮರವನ್ನು ಬೆಳಸುವುದಿದೆ. ಇದರ ವೈಜ್ಞಾನಿಕ ಹೆಸರು ಎಂಬ್ಲಿಕ ಅಫಿಸಿನ್ಯಾಲಿಸ್ (ಫಿಲ್ಯಾಂತಸ್ ಎಂಬ್ಲಿಕ ಪರ್ಯಾಯನಾಮ). ಇದಕ್ಕೆ ಬೆಟ್ಟದ ನೆಲ್ಲಿಕಾಯಿ ಎಂಬ ಹೆಸರೂ ಉಂಟು. ಇದು 10-15 ಮೀ ಎತ್ತರಕ್ಕೆ ಬೆಳೆಯುತ್ತದೆ. ಕಾಂಡ ಬಲು ಗಟ್ಟಿ. ತೊಗಟೆ ಬೂದುಬಣ್ಣದ್ದು. ಎಲೆಗಳು ಸಂಯುಕ್ತ ಮಾದರಿಯವು; ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿವೆ. ಒಂದೊಂದು ಎಲೆಯಲ್ಲೂ ಸುಮಾರು 40-60 ಕಿರಿಯಗಲದ ಕಿರುಎಲೆಗಳುಂಟು. ಹೂಗಳು ಹಸರು ಬಣ್ಣದವು; ಗುಂಪು ಗುಂಪಾಗಿ ಎಲೆಗಳ ಕೆಳಗೆ ಟೊಂಗೆಗಳ ಮೇಲೆ ಅರಳುವುವು. ಹೂಗಳು ಏಕಲಿಂಗಿಗಳು. ಆದರೆ ಮರ ದ್ವಿಲಿಂಗಿ. ಗಂಡು ಮತ್ತು ಹೆಣ್ಣು ಹೂಗಳೆರಡೂ ಒಂದೇ ಮರದಲ್ಲಿವೆ. ಗಂಡು ಹೂಗಳು ಬಹು ಸಣ್ಣವು ಮತ್ತು ಚಿಕ್ಕ ತೊಟ್ಟೊಂದರ ಮೇಲೆ ಅಧಿಕ ಸಂಖ್ಯೆಯಲ್ಲಿ ಅರಳುತ್ತವೆ. ಹೆಣ್ಣು ಹೂಗಳು ಚಿಕ್ಕವಾದರೂ ಅಧಿಕ ಸಂಖ್ಯೆಯಲ್ಲಿರುವುದಿಲ್ಲ. ಮರ ನವೆಂಬರ್‍ನಿಂದ ಫೆಬ್ರವರಿಯವರೆಗೂ ಹೂ ಹಾಗೂ ಕಾಯಿಗಳಿಂದ ಕೂಡಿರುವುದು.

	ನೆಲ್ಲಿಕಾಯಿಗಳು ಗುಂಡಾಗಿದೆ; ಇವುಗಳ ವ್ಯಾಸ 1.5-2.5 ಸೆಂಮೀ. ಹಸುರು ಬಣ್ಣದ ಪ್ರತಿಯೊಂದು ಕಾಯಿಯ ಒಳಗೆ ಆರು ಮೂಲೆಯ ಬೀಜವುಂಟು.

	ಮೂಲವ್ಯಾಧಿ, ಪಿತ್ತಜನಕಾಂಗದ ಹಿಗ್ಗುವಿಕೆ, ಹೊಟ್ಟೆನೋವು, ಕಣ್ಣುನೋವುಗಳ ಚಿಕಿತ್ಸೆಗೆ ನೆಲ್ಲಿಕಾಯಿ ಉತ್ತಮವೆನಿಸಿದೆ. ಆಯುರ್ವೇದೀಯ ಪದ್ಧತಿಯಲ್ಲಿ ಕೊಡುವ ತ್ರಿಫಲ ಮತ್ತು ಚ್ಯವನಪ್ರಾಶ ತಯಾರಿಕೆಗೆ ನೆಲ್ಲಿಕಾಯಿಯೇ ಮುಖ್ಯ ಘಟಕ. ದೇಹವನ್ನು ತಂಪುಗೊಳಿಸಲು ನೆಲ್ಲಿಕಾಯಿಗಳನ್ನು ಹಸಿಯಾಗಿಯೇ ಉಪಯೋಗಿಸುವುದಿದೆ. ಸ್ವಲ್ಪ ಮಟ್ಟಿಗೆ ಭೇದಿ ಮಾಡಿಸುವ (ಹೆಚ್ಚಾಗಿ ತಿಂದಲ್ಲಿ) ಗುಣವೂ ಇದಕ್ಕೆ ಉಂಟು. ಕಾಯಿಗಳನ್ನು ಕೊಳೆಯಿಸಿ ಬುರುಗು ಬರಿಸಿ ತಯಾರಿಸುವ ಪಾನೀಯವನ್ನು ರಕ್ತಹೀನತೆ, ಆಹಾರ ಪಚನವಾಗದಿರುವಿಕೆ, ಕಾಮಾಲೆ, ಹೃದ್ರೋಗಗಳು, ನೆಗಡಿಗಳ ಚಿಕಿತ್ಸೆಗೆ ಉಪಯೋಗಿಸುತ್ತಾರೆ. ಕಾಯಿಗೆ ಮೂತ್ರೋತ್ತೇಜಕ ಗುಣವೂ ಇದೆ.

	ನೆಲ್ಲಿಕಾಯಿಯಲ್ಲಿ ಅಧಿಕ ಪ್ರಮಾಣದ ಸಿ ವಿಟಮಿನ್ ಉಂಟು. ಆದ್ದರಿಂದ ಸ್ಕರ್ವಿ ರೋಗವನ್ನು ಗುಣಪಡಿಸಲು ಇವನ್ನು ಬಹು ಯಶಸ್ವಿಯಾಗಿ ಬಳಸಿಕೊಳ್ಳುಬಹುದು. ಶ್ವಾಸಕೋಶಗಳ ಕ್ಷಯಪೀಡಿತ ರೋಗಿಗಳ ಮೇಲೆ ನಡೆಸಲಾಗಿರುವ ಪ್ರಯೋಗಗಳಿಂದ ಸಂಶ್ಲೇಷಿತ ಸಿ ವಿಟಮಿನ್‍ಗಿಂತ ಶೀಘ್ರಗತಿಯಲ್ಲಿ ನೆಲ್ಲಿಕಾಯಿಯಲ್ಲಿರುವ ಸಿ ವಿಟಮಿನ್ ದೇಹವನ್ನು ಪ್ರವೇಶಿಸುತ್ತದೆ ಎಂದು ಗೊತ್ತಾಗಿದೆ. ಒಣಗಿದ ಫಲಗಳನ್ನು ಆಮಶಂಕೆಯ ಚಿಕಿತ್ಸೆಯಲ್ಲಿ ಉಪಯೋಗಿಸುವುದುಂಟು. ಗೂರಲು ಮತ್ತು ಕೆಮ್ಮುಗಳ ನಿವಾರಣೆಗೆ ಬೀಜಗಳನ್ನು ಬಳಸುವುದಿದೆ.

	ನೆಲ್ಲಿಕಾಯಿಯನ್ನು ಉಪ್ಪಿನಕಾಯಿ ಹಾಕಲು ಉಪಯೋಗಿಸುವುದಂತೂ ಸುಪರಿಚಿತ. ಕಾಯಿ, ಎಲೆ, ತೊಗಟೆಗಳನ್ನು ಬಣ್ಣಗಳ ಹಾಗೂ ಶಾಯಿಯ ತಯಾರಿಕೆಯಲ್ಲಿ ಹೇರಳವಾಗಿ ಉಪಯೋಗಿಸುತ್ತಾರೆ. ಫಲಗಳನ್ನು ಶಾಂಪೂ ಮತ್ತು ಇತರ ತೈಲಗಳ (ಉದಾ: ಭೃಂಗಾಮಲಕ ತೈಲ) ತಯಾರಿಕೆಯಲ್ಲೂ ಬಳಸುವುದುಂಟು. ಎಲೆಗಳು ಏಲಕ್ಕಿ ಗಿಡಗಳಿಗೆ ಒಳ್ಳೆಯ ಹಸುರು ಗೊಬ್ಬರ.
(ಎಸ್.ಐ.ಎಚ್.; ಎಸ್.ಎನ್.ಆರ್.)
ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ